ಮಂಗಳೂರು :
ಸ್ಯಾಂಡಲ್ವುಡ್ನಲ್ಲಿ ಬ್ಯುಸಿಯಾಗಿದ್ದ ಕುಡ್ಲದ ಕುವರ ಪೃಥ್ವಿ ಅಂಬಾರ್ ಮರಳಿ ತಾಯ್ನೆಲಕ್ಕೆ ಕಾಲಿರಿಸಿದ್ದು, ತುಳು ಸಿನಿಮಾವೊಂದಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕನಾಗಿ ಪಾದಾರ್ಪಣೆ ಮಾಡಲಿದ್ದಾರೆ.
ಅಂದ ಹಾಗೆ ಈಗಾಗಲೇ ಈ ನೂತನ ಸಿನಿಮಾದ ಮುಹೂರ್ತ ಕದ್ರಿ ದೇವಾಲಯದಲ್ಲಿ ಇತ್ತೀಚೆಗೆ ನಡೆದಿದ್ದು, ಲಂಚುಲಾಲ್ ಕೆ.ಎಸ್. ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಸೆ.7ರಂದು ಸಿನಿಮಾದ ಟೈಟಲ್ ರಿಲೀಸ್ ಆಗಲಿದೆ.
ಪೃಥ್ವಿ ಅಂಬಾರ್ ನಟನೆಯ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ನಿರ್ಮಾಣದ ಮೊದಲ ಚಿತ್ರ ‘ಕೊತ್ತಲವಾಡಿ’ ತೆರೆಗೆ ಬಂದಿದೆ. ಮಯೂರ ರಾಘವೇಂದ್ರ ಅಭಿನಯದ ‘ಅಬ ಜಬ ಡಬ’ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ನಡುವೆ ನಟನೆ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದಿರುವ ಪೃಥ್ವಿ ಅಂಬಾರ್ ಅವರು ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ್ದು, ಇದೀಗ ನಿರ್ದೇಶನದ ಜಗತ್ತಿನತ್ತ ಹೆಜ್ಜೆ ಹಾಕಿದ್ದಾರೆ. 2016ರಲ್ಲಿ ‘ಪಿಲಿಬೈಲು ಯಮುನಕ್ಕ’ ಚಿತ್ರದ ಮೂಲಕ ತುಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ ಪೃಥ್ವಿ ಅಂಬಾರ್, ದಶಕದ ಬಳಿಕ ಮತ್ತೆ ತುಳುವಿನತ್ತ ಮರಳುತ್ತಿದ್ದಾರೆ. ನಟನಾಗಿ ತನ್ನ ಪಯಣ ಆರಂಭಿಸಿದ್ದ ಅಂಬಾರ್, ಇದೀಗ ಅದೇ ತುಳು ಚಿತ್ರರಂಗದ ಮೂಲಕ ನಿರ್ದೇಶಕರಾಗಿ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದ್ದಾರೆ.